Telegram Join My Telegram   WhatsApp Join My WhatsApp

ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆಯುವ ಅವಕಾಶ ಹೆಚ್ಚಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ

ಉದ್ಯೋಗಮೇಳಗಳು ಉದ್ಯೋಗಾಕಾಂಕ್ಷಿಗಳಿಗೆ ಅತ್ಯಂತ ಉಪಯುಕ್ತ ವೇದಿಕೆಗಳಾಗಿವೆ. ಉದ್ಯೋಗದಾತರು ಮತ್ತು ಉದ್ಯೋಗ ಹುಡುಕುವವರನ್ನು ಒಂದೇ ಸ್ಥಳದಲ್ಲಿ ಸೇರಿಸುವ ಈ ಕಾರ್ಯಕ್ರಮಗಳು ಉದ್ಯೋಗಾವಕಾಶಗಳನ್ನು ಸುಲಭವಾಗಿ ತಲುಪಿಸುವ ಕೆಲಸ ಮಾಡುತ್ತವೆ.

‎ರಾಜ್ಯ ಅಥವಾ ಕೇಂದ್ರ ಸರಕಾರಗಳೂ ಸೇರಿದಂತೆ ಕೆಲವು ಖಾಸಗಿ ಕಂಪನಿಗಳು ಉದ್ಯೋಗ ಮೇಳಗಳನ್ನು ನಡೆಸುತ್ತವೆ. ಸರಕಾರದ ಕೌಶಲಾಭಿವೃದ್ಧಿ ಇಲಾಖೆಗಳು ಪ್ರತಿ ವರ್ಷ ನಿಗದಿತ. ಉದ್ಯೋಗ ಮೇಳಗಳನ್ನು ನಡೆಸುತ್ತವೆ. ಈ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿಗಳನ್ನು ನೀವು ನೋಡಿರಬಹುದು. ದೇಶದ ಯುವಜನರು ಸುಲಭವಾಗಿ ಉದ್ಯೋಗ ಪಡೆದುಕೊಳ್ಳಲು ಸರಕಾರ ಅಥವಾ ಸರಕಾರೇತರ ಸಂಸ್ಥೆಗಳು ಇಂಥ ವೇದಿಕೆಯನ್ನು ಮಾಡಿಕೊಡುತ್ತವೆ. ಆದರೆ, ಇವತ್ತಿಗೂ ಅಭ್ಯರ್ಥಿಗಳಿಗೆ ಇಂಥ ಉದ್ಯೋಗ ಮೇಳಗಳ ಮಾಹಿತಿ ಕೊರತೆ ಇರುತ್ತದೆ. ಈ ಉದ್ಯೋಗ ಮೇಳಗಳು ಎಲ್ಲಿ ನಡೆಯುತ್ತವೆ, ಹೇಗಿರುತ್ತವೆ ಮತ್ತು ಅದಕ್ಕಾಗಿ ತಮ್ಮ ಸಿದ್ಧತೆ ಹೇಗಿರಬೇಕು ಎನ್ನುವುದರ ಕುರಿತು ಅಭ್ಯರ್ಥಿಗಳು ಮುಂಚಿತವಾಗಿ ಮಾಹಿತಿ ಸಂಗ್ರಹಿಸಿದರೆ ಇಂಥ ಉದ್ಯೋಗ ಮೇಳಗಳು ಉದ್ಯೋಗಾಕಾಂಕ್ಷಿಗಳು ತಮಗಿಷ್ಟವಾದ ಉದ್ಯೋಗ ಪಡೆಯಲು ಸುಲಭ ಮಾರ್ಗವಾಗುತ್ತದೆ.

ಇದರಿಂದ ಏನು ಪ್ರಯೋಜನ?

ಅಭ್ಯರ್ಥಿಗಳು ಒಂದೇ ದಿನದಲ್ಲಿ ಹಲವು ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಬಹುದು. ಸಾಮಾನ್ಯ ವಾಗಿ ಒಂದು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಪ್ರತ್ಯೇಕವಾಗಿ ಹಲವು ವೆಬ್‌ಸೈಟ್‌ಗಳಲ್ಲಿ ನೋಂದಣಿ ಮಾಡಬೇಕಾಗುತ್ತದೆ. ಆದರೆ ಉದ್ಯೋಗ ಮೇಳದಲ್ಲಿ ವಿವಿಧ ಕ್ಷೇತ್ರಗಳ ಕಂಪನಿಗಳು ಭಾಗವಹಿಸುವುದರಿಂದ ಅಭ್ಯರ್ಥಿಗಳಿಗೆ ಸಮಯ ಮತ್ತು ಶ್ರಮ ಎರಡೂ ಉಳಿತಾಯವಾಗುತ್ತದೆ. ಕೆಲವೊಮ್ಮೆ ಸ್ಥಳದಲ್ಲಿಯೇ.. ಸಂದರ್ಶನಗಳನ್ನು ನಡೆಸಿದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತಹ ಅವಕಾಶಗಳೂ ಇರುತ್ತದೆ. ಉದ್ಯೋಗ ಮೇಳಗಳು ನೆಟ್‌ವರ್ಕಿಂಗ್‌ಗೆ ಉತ್ತಮ ವೇದಿಕೆ. ಕಂಪನಿಗಳ ಅಧಿಕಾರಿಗಳು, ಉದ್ಯಮ ತಜ್ಞರು ಹಾಗೂ ಇತರ ಅಭ್ಯರ್ಥಿಗಳೊಂದಿಗೆ ಸಂಪರ್ಕ ಬೆಳೆಸಿಕೊಳ್ಳಬಹುದು. ಈ ಸಂಪರ್ಕಗಳು ಭವಿಷ್ಯದಲ್ಲಿ ಪಡೆದುಕೊಳ್ಳಲು ಸಹಕಾರಿ ಆಗಿರುತ್ತದೆ. ವಿಶೇಷವಾಗಿ ಈಗಷ್ಟೇ ಪದವೀಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಉದ್ಯಮದ ಅಗತ್ಯತೆ, ನಿರೀಕ್ಷೆ ಹಾಗೂ ಉದ್ಯೋಗ ಮಾರುಕಟ್ಟೆಯ  ಟ್ರೆಂಡ್ ಬಗ್ಗೆ ಅರಿವು ಮೂಡಿಸಲು ಇಂತಹ ಮೇಳಗಳು ಸಹಾಯ ಮಾಡುತ್ತದೆ. ಫ್ರೆಶರ್ಸ್‌ಗೆ ಮಾತ್ರವಲ್ಲದೆ ಅನುಭವ ಹೊಂದಿರುವ  ವೃತ್ತಿಪರರಿಗೂ ಉದ್ಯೋಗ ಮೇಳಗಳು ಅನುಕೂಲಕಾರಿ. ಉತ್ತಮ ವೇತನ, ಉತ್ತಮ ಹುದ್ದೆ ಅಥವಾ ಹೊಸ ಕ್ಷೇತ್ರದಲ್ಲಿ ಅವಕಾಶ ಹುಡುಕುತ್ತಿರುವವರು ತಮ್ಮ ಕೌಶಲ ಮತ್ತು ಅನುಭವವನ್ನು ನೇರವಾಗಿ ಕಂಪನಿಗಳ ಮುಂದೆ ಪ್ರದರ್ಶಿಸಬಹುದು.

ತಿಳಿಯುವುದು ಹೇಗೆ?

‎ಉದ್ಯೋಗ ಮೇಳಗಳು ಎಲ್ಲಿರುತ್ತವೆ ಎಂದು ತಿಳಿಯುವುದು ಹೇಗೆ? ಎನ್ನುವುದು ಹಲವರ ಪ್ರಶ್ನೆ, ಮೊದಲನೆಯದಾಗಿ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಪ್ಲೇಸ್‌ಮೆಂಟ್ ಸೆಲ್ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತವೆ. ಎರಡನೆಯದಾಗಿ, ಉದ್ಯೋಗ ಸಂಬಂಧ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಆ್ಯಪ್‌ಗಳಲ್ಲಿ ಉದ್ಯೋಗ ಮೇಳಗಳ ಕುರಿತು ಪ್ರಕಟಣೆಗಳು ಬರುತ್ತಲಿರುತ್ತದೆ.

‎ಮೂರನೆಯದಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಕಂಪನಿಗಳು, ಉದ್ಯೋಗ ಸಂಸ್ಥೆಗಳು ಮತ್ತು ಸರಕಾರಿ ಇಲಾಖೆಗಳು ತಮ್ಮ ಅಧಿಕೃತ ಖಾತೆಗಳ ಮೂಲಕ ಮಾಹಿತಿ ಹಂಚಿಕೊಳ್ಳುತ್ತವೆ. ಇದರ ಜತೆಗೆ, ರಾಜ್ಯ ಮತ್ತು ಕೇಂದ್ರ ಸರಕಾರದ ಉದ್ಯೋಗ ಹಾಗೂ ಕೌಶಲಾಭಿವೃದ್ಧಿ ಇಲಾಖೆಗಳು ಉದ್ಯೋಗ ಮೇಳಗಳನ್ನು ಆಯೋಜಿಸುತ್ತವೆ. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳು ಮತ್ತು ಕೌಶಲಾಭಿವೃದ್ಧಿ ಕೇಂದ್ರಗಳಲ್ಲಿಯೂ ಈ ಕುರಿತು ಮಾಹಿತಿ ಲಭ್ಯ ಇರುತ್ತದೆ.ಹಾಗೆಯೇಸ್ಥಳೀಯ ಪತ್ರಿಕೆಗಳು, ಹಾಗೂ ಸುದ್ದಿವಾಹಿನಿಗಳಲ್ಲಿಯೂ ಉದ್ಯೋಗ ಮೇಳಗಳ ಜಾಹೀರಾತುಗಳನ್ನು ಕಾಣಬಹುದು.

ಹೇಗೆ ಸಿದ್ಧರಾಗಬೇಕು?

ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆಯಬೇಕಾದರೆ ಕೆಲವು ಸಿದ್ಧತೆಗಳು ಅಗತ್ಯವಾಗಿವೆ. ನಿಮ್ಮ ವಿದ್ಯಾರ್ಹತೆ, ಸಾಧನೆ ಮತ್ತು ಕೌಶಲಗಳನ್ನು ಸ್ಪಷ್ಟವಾಗಿರುವ ಅಚ್ಚುಕಟ್ಟಾದ ಸ್ವವಿವರಗಳ ರೆಸ್ಯುಮೆಯನ್ನು ಸಿದ್ಧ ಮಾಡಬೇಕು. ಉದ್ಯೋಗ ಮೇಳಕ್ಕೆ ಹೋಗುವಾಗ ಕನಿಷ್ಠ ಹತ್ತರಿಂದ ಹದಿನೈದು ಪ್ರತಿಗಳನ್ನು ಇಟ್ಟುಕೊಳ್ಳಿ. ಕೆಲವೊಮ್ಮೆ ಕಂಪನಿಗಳು ಕಾಗದದ ರೆಸ್ಯುಮೆಗಿಂತ ಕ್ಯೂಆರ್‌ಕೋಡ್ ಸ್ಕ್ಯಾನ್ಅಥವಾ ಈಮೇಲ್ ಮಾಡಲು ಹೇಳಲೂ ಬಹುದು. ಹಾಗಾಗಿ ನಿಮ್ಮ ರೇಸುಮೆಯ ಸಾಫ್ಟ್ ಕಾಪಿಯನ್ನು ಮೊಬೈಲ್ನಲ್ಲಿ ಸುಲಭವಾಗಿ ಸಿಗುವಂತೆ ಇಟ್ಟುಕೊಳ್ಳಿ.. ಅಥವಾ ನಿಮ್ಮ ಲಿಂಕೆಡ್ ಇನ್ ಪ್ರೊಫೈಲ್‌ನ ಕ್ಯೂಆರ್ ಕೋಡ್ ಸಿದ್ಧವಾಗಿರಲಿ. ಮೇಳದಲ್ಲಿ ಯಾವೆಲ್ಲ ಕಂಪನಿಗಳು ಭಾಗವಹಿಸುತ್ತಿವೆ ಎಂಬ ಪಟ್ಟಿಯನ್ನು ಮೊದಲೇ ಪಡೆದುಕೊಂಡು, ಆ ಸಂಸ್ಥೆಗಳ ಹಿನ್ನೆಲೆ ಮತ್ತು ಅಲ್ಲಿರುವ ಕೆಲಸದ ಸ್ವರೂಪದ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿ. ಇದು ಸಂದರ್ಶಕರ ಮುಂದೆ ಆತ್ಮವಿಶ್ವಾಸದಿಂದ ಮಾತನಾಡಲು ಸಹಕಾರಿಯಾಗುತ್ತದೆ. ಜೊತೆಗೆ, ನಿಮ್ಮನ್ನು ನೀವು ಹೇಗೆ ಪರಿಚಯಿಸಿಕೊಳ್ಳಬಹುದು ಎಂಬುದನ್ನು ಮನೆಯಲ್ಲೇ ಕನ್ನಡಿಯ ಮುಂದೆ ನಿಂತು ಅಭ್ಯಾಸ ಮಾಡಿಕೊಳ್ಳಿ. ಸಂದರ್ಶಕರು ಪ್ರಶ್ನೆ ಕೇಳಿದಾಗ ಗಾಬರಿಯಾಗದೆ, ನೇರವಾಗಿ ಮತ್ತು ಪ್ರಾಮಾಣಿಕವಾಗಿ ಉತ್ತರಿಸಿ. ಒಂದು ವೇಳೆ ಯಾವುದಾದರೂ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ, ಸುಳ್ಳು ಹೇಳಿ ಸಿಕ್ಕಿಬೀಳುವ ಬದಲು ಗೊತ್ತಿಲ್ಲವೆಂದು ಒಪ್ಪಿಕೊಳ್ಳುವುದು ಪ್ರಬುದ್ಧ ಲಕ್ಷಣವಾಗಿದೆ. ಉದ್ಯೋಗ ಮೇಳಗಳಲ್ಲಿ ಸ್ಥಳದಲ್ಲೇ ಸಂದರ್ಶನಗಳು ನಡೆಯುವುದರಿಂದ ನಿಮ್ಮ ಉಡುಗೆ-ತೊಡುಗೆ ಮತ್ತು ನಡವಳಿಕೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.

ಸಮಯಕ್ಕೆ ಬೆಲೆ ಕೊಡಿ:

ಉದ್ಯೋಗ ಮೇಳಗಳಲ್ಲಿ ನಿಗದಿತ ಸಮಯಕ್ಕಿಂತ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ತಲುಪುವುದು ಬಹಳ ಮುಖ್ಯ.

‎ತಡವಾಗಿ ಹೋದರೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ ಮತ್ತು ಅಷ್ಟರಲ್ಲೇ ಕಂಪನಿಗಳ ಪ್ರಮುಖ ಇಂಟ‌ವ್ಯೂ ಸ್ಲಾಟ್ (Slot) ಗಳು ಭರ್ತಿಯಾಗಿರಬಹುದು.. ಆದ್ದರಿಂದ ಮುಂಚಿತವಾಗಿ ಹೋದರೆ ಅಲ್ಲಿನ ವಾತಾವರಣಕ್ಕೆ ಮಾನಸಿಕವಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.!

‎ನೂರಾರು ಕಂಪನಿಗಳಿರುವಾಗ ಎಲ್ಲ ಕಡೆಯೂ ಹೋಗಲು ಸಮಯ ಸಾಲದೇ ಇರಬಹುದು. ಅದಕ್ಕಾಗಿ ನೀವು ಮೊದಲು ಸಂದರ್ಶನ ನೀಡಬೇಕಾದ ಟಾಪ್ 5 ರಿಂದ 10 ಕಂಪನಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು, ಮೊದಲು ಆ ಕೌಂಟರ್‌ಗಳಿಗೆ ಭೇಟಿಯನ್ನು ನೀಡಬೇಕು . ನಂತರ ಉಳಿದ ಕಂಪನಿಗಳ ಕಡೆಗೆ ಗಮನ ಹರಿಸಿ. ಒಂದು ವೇಳೆ, ದಿನವಿಡೀ ಸಾಲಿನಲ್ಲಿ ನಿಂತು ಸುಸ್ತಾದರೂ ಕೂಡ,, ಸಂದರ್ಶಕರ ಮುಂದೆ ಹೋಗಿ ಕೂತಾಗ ಆಯಾಸ ತೋರಿಸಲೇಬೇಡಿ. ಹ್ಯಾಂಡ್‌ ಶೇಕ್ ನೀಡುವುದು,, ಹಾಗೆಯೇ ನೇರವಾದ ಕಣ್ಣಿನ ಸಂಪರ್ಕ ಮತ್ತು ಸ್ಪಷ್ಟವಾದ ಧ್ವನಿ ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತದೆ. ಸಂದರ್ಶನದ ಕೊನೆಯಲ್ಲಿ ನಿಮಗೆ ಏನಾದರೂ ಪ್ರಶ್ನೆ ಕೇಳಬೇಕಿದೆಯೇ? ಎಂದು ಸಂದರ್ಶನಕಾರರು ಕೇಳಿದಾಗ ಮೌನವಾಗಿರಬೇಡಿ..! ಆ ಕಂಪನಿಯ ತರಬೇತಿ ಪ್ರಕ್ರಿಯೆ ಅಥವಾ ಕೆಲಸದ ಬಗ್ಗೆ ಪ್ರಶ್ನೆಯನ್ನು ಕೇಳಿ. ಇದು ನಿಮಗೆ ಆ ಕೆಲಸದ ಮೇಲಿರುವ ಆಸಕ್ತಿಯನ್ನು ತೋರಿಸುತ್ತದೆ.

ಸೋಲಿನಿಂದ ಕಲಿಯಿರಿ  ::

‎ಒಂದು ವೇಳೆ, ಮೇಳದಲ್ಲಿ ಮೊದಲ ಒಂದೆರಡು ಕಂಪನಿಗಳಲ್ಲಿ ರಿಜೆಕ್ಟ್ ಆದರೂ ಬೇಸರ ಮಾಡಿಕೊಳ್ಳಬೇಡಿ. ಅಲ್ಲಿನ ಸಂದರ್ಶಕರು ಯಾವ ರೀತಿಯ ಪ್ರಶ್ನೆ ಕೇಳಿದ್ದಾರೆ, ನಿಮ್ಮಲ್ಲಿ ಏನು ಕೊರತೆಯಿದೆ ಎಂಬುದನ್ನು ಗಮನಿಸಿ, ತಕ್ಷಣವೇ ಮುಂದಿನ ಕಂಪನಿಯ ಸಾಲಿನಲ್ಲಿ ನಿಲ್ಲುವ ಮುನ್ನ ಆ ತಪ್ಪುಗಳನ್ನು ತಿದ್ದಿಕೊಳ್ಳಿ. ಅನುಭವದಿಂದಲೇ ಹಲವು ಪಾಠಗಳನ್ನು ಕಲಿಯಬಹುದು. ಈ ರೀತಿಯ ಸೂತ್ರಗಳನ್ನು ಬಳಸಿದರೆ ಉದ್ಯೋಗ ನಿಮ್ಮ ಕೈ ಸೇರುವುದಂತೂ ಖಚಿತ.

ಉದ್ಯೋಗ ಮೇಳದಲ್ಲಿ ಯಶಸ್ಸು ಪಡೆಯಲು 15 ಪ್ರಮುಖ ಟಿಪ್ಸ್

1. ಕಂಪನಿಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳಿ

‎ಯಾವ ಕಂಪನಿಗಳು ಭಾಗವಹಿಸುತ್ತಿವೆ, ಅವು ಯಾವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತವೆ ಹಾಗೂ ಯಾವ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿವೆ ಎಂಬುದನ್ನು ಮೊದಲೇ ತಿಳಿದುಕೊಳ್ಳಿ.

2. ರೆಸ್ಯೂಮ್ ಅನ್ನು ಪ್ರತಿ ಉದ್ಯೋಗಕ್ಕೆ ಹೊಂದಿಸಿ

‎ಒಂದೇ ರೆಸ್ಯೂಮ್ ಎಲ್ಲ ಕಂಪನಿಗಳಿಗೆ ನೀಡುವ ಬದಲು, ಸಂಬಂಧಿತ ಕೌಶಲಗಳನ್ನು ಹೈಲೈಟ್ ಮಾಡುವಂತೆ ಸಿದ್ಧಪಡಿಸಿ.

‎3. ವೃತ್ತಿಪರ ಉಡುಗೆ ಧರಿಸಿ

‎ಮೊದಲ ಅಭಿಪ್ರಾಯ ಬಹಳ ಮುಖ್ಯ. ಸ್ವಚ್ಛ ಮತ್ತು ಸರಳವಾದ ಫಾರ್ಮಲ್ ಉಡುಗೆ ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.

4. ಒಂದು ನಿಮಿಷದ ಪರಿಚಯ ಸಿದ್ಧಪಡಿಸಿ

‎”ನಿಮ್ಮ ಬಗ್ಗೆ ಹೇಳಿ” ಎಂಬ ಪ್ರಶ್ನೆಗೆ 30–60 ಸೆಕೆಂಡ್‌ನಲ್ಲಿ ಸ್ಪಷ್ಟವಾಗಿ ಉತ್ತರಿಸುವ ಅಭ್ಯಾಸ ಮಾಡಿ.

‎5. ಸಮಯಕ್ಕಿಂತ ಬೇಗ ತಲುಪಿ

‎ಕನಿಷ್ಠ 30 ರಿಂದ 60 ನಿಮಿಷ ಮುಂಚಿತವಾಗಿ ಹೋದರೆ ನೋಂದಣಿ ಹಾಗೂ ಸಂದರ್ಶನಕ್ಕೆ ಆರಾಮವಾಗಿ ಸಿದ್ಧರಾಗಬಹುದು.

6. ಅಗತ್ಯ ದಾಖಲೆಗಳನ್ನು ಜೊತೆಯಲ್ಲಿ ಇಡಿ

‎ರೆಸ್ಯೂಮ್, ಆಧಾರ್ ಕಾರ್ಡ್, ವಿದ್ಯಾರ್ಹತಾ ಪ್ರಮಾಣಪತ್ರಗಳು, ಅನುಭವ ಪ್ರಮಾಣಪತ್ರ ಹಾಗೂ ಪಾಸ್‌ಪೋರ್ಟ್ ಗಾತ್ರದ ಫೋಟೋಗಳನ್ನು ತೆಗೆದುಕೊಂಡು ಹೋಗಿ.

7. ಆತ್ಮವಿಶ್ವಾಸದಿಂದ ಮಾತನಾಡಿ

‎ಗಾಬರಿಯಾಗದೆ, ಸ್ಪಷ್ಟ ಧ್ವನಿಯಲ್ಲಿ ಮತ್ತು ನಗುಮುಖದಿಂದ ಉತ್ತರಿಸಿ.

‎8. ಮೊಬೈಲ್ ಬಳಕೆ ಕಡಿಮೆ ಮಾಡಿ

‎ಸಂದರ್ಶನದ ವೇಳೆ ಮೊಬೈಲ್ ಸೈಲೆಂಟ್‌ನಲ್ಲಿ ಇರಿಸಿ. ಇದು ನಿಮ್ಮ ವೃತ್ತಿಪರ ನಡವಳಿಕೆಯನ್ನು ತೋರಿಸುತ್ತದೆ.

‎9. ಪ್ರಶ್ನೆಗಳನ್ನು ಕೇಳಲು ಹಿಂಜರಿಯಬೇಡಿ

‎ಕೆಲಸದ ಜವಾಬ್ದಾರಿ, ತರಬೇತಿ, ಕೆಲಸದ ಸಮಯ ಅಥವಾ ಬೆಳವಣಿಗೆಯ ಅವಕಾಶಗಳ ಬಗ್ಗೆ ಕೇಳಬಹುದು.

10. ತಿರಸ್ಕಾರದಿಂದ ನಿರಾಶರಾಗಬೇಡಿ

‎ಒಂದು ಕಂಪನಿಯಲ್ಲಿ ಆಯ್ಕೆಯಾಗದಿದ್ದರೂ, ಮುಂದಿನ ಕಂಪನಿಗೆ ಇನ್ನಷ್ಟು ಆತ್ಮವಿಶ್ವಾಸದಿಂದ ಪ್ರಯತ್ನಿಸಿ.

11. ದೇಹಭಾಷೆಯ ಬಗ್ಗೆ ಗಮನ ಕೊಡಿ

‎ನೇರವಾಗಿ ನಿಲ್ಲುವುದು, ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವುದು ಮತ್ತು ವಿನಯದಿಂದ ವರ್ತಿಸುವುದು ಉತ್ತಮ ಪ್ರಭಾವ ಬೀರುತ್ತದೆ.

12. ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ನವೀಕರಿಸಿ

‎ವಿಶೇಷವಾಗಿ LinkedIn ಪ್ರೊಫೈಲ್ ಅನ್ನು ಅಪ್‌ಡೇಟ್ ಮಾಡಿಕೊಂಡಿದ್ದರೆ ಕೆಲವು ಕಂಪನಿಗಳು ಅದನ್ನು ಪರಿಶೀಲಿಸಬಹುದು.

13. ಒಂದೇ ದಿನ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಿ

‎ನಿಮಗೆ ಇಷ್ಟವಾದ 5–10 ಕಂಪನಿಗಳಿಗೆ ಆದ್ಯತೆ ನೀಡಿ. ನಂತರ ಉಳಿದ ಕಂಪನಿಗಳನ್ನೂ ಭೇಟಿ ಮಾಡಿ.

14. ಟಿಪ್ಪಣಿಗಳನ್ನು ಮಾಡಿಕೊಳ್ಳಿ

‎ಯಾವ ಕಂಪನಿಯಲ್ಲಿ ಸಂದರ್ಶನ ನೀಡಿದ್ದೀರಿ, ಅವರು ಏನು ಹೇಳಿದರು ಎಂಬುದನ್ನು ಬರೆದುಕೊಂಡರೆ ಮುಂದಿನ ಹಂತದಲ್ಲಿ ಸಹಾಯವಾಗುತ್ತದೆ.

‎15. ಸಂದರ್ಶನದ ನಂತರ ಸಂಪರ್ಕದಲ್ಲಿರಿ

‎ಸಾಧ್ಯವಾದರೆ HR ನೀಡಿದ ಸಂಪರ್ಕ ವಿವರಗಳನ್ನು ಉಳಿಸಿಕೊಂಡು, ಮುಂದಿನ ಹಂತದ ಬಗ್ಗೆ ವಿನಯದಿಂದ ಮಾಹಿತಿ ಪಡೆಯಬಹುದು.

ಯಾರು ಭಾಗವಹಿಸಬಹುದು?

ಉದ್ಯೋಗ ಮೇಳಗಳು ಕೇವಲ ಫ್ರೆಶರ್ಸ್‌ಗಾಗಿ ಮಾತ್ರವಲ್ಲ. ಈಗಾಗಲೇ ಉದ್ಯೋಗದಲ್ಲಿರುವವರು ಉತ್ತಮ ವೇತನ ಅಥವಾ ಉತ್ತಮ ಹುದ್ದೆಯ ಅವಕಾಶಗಳನ್ನು ಹುಡುಕುತ್ತಿದ್ದರೂ ಇಂತಹ ಮೇಳಗಳಲ್ಲಿ ಭಾಗವಹಿಸಬಹುದು.

ಈ ಕೆಳಗಿನ ಅಭ್ಯರ್ಥಿಗಳಿಗೆ ಉದ್ಯೋಗ ಮೇಳಗಳು ಹೆಚ್ಚು ಉಪಯುಕ್ತವಾಗುತ್ತವೆ.

  • ಹೊಸದಾಗಿ ಪದವಿ ಪಡೆದ ವಿದ್ಯಾರ್ಥಿಗಳು
  • ಡಿಪ್ಲೊಮಾ ಮತ್ತು ಐಟಿಐ ಅಭ್ಯರ್ಥಿಗಳು
  • ಅನುಭವ ಹೊಂದಿರುವ ಉದ್ಯೋಗಿಗಳು
  • ಉದ್ಯೋಗ ಬದಲಾವಣೆ ಬಯಸುವವರು
  • ಕೌಶಲ ತರಬೇತಿ ಪಡೆದ ಯುವಕರು.

 

ಇದನ್ನೂ ಓದಿ : ಜೂಲೈ 1 ರಿಂದ ಬದಲಾಗುತ್ತಿರುವ ನಿಯಮಗಳು : ನಿಮ್ಮ ಜೇಬಿನ ಮೇಲೆ ಯಾವ ಪರಿಣಾಮ

Leave a Comment