ದೆಹಲಿ ಮನಗೆದ್ದ ಉಡುಪಿಯ ಪಂಚರತ್ನಗಳು: ದೇಶಕ್ಕೇ ಮಾದರಿಯಾದ 5 ಗ್ರಾಮ ಪಂಚಾಯಿತಿಗಳ ಕ್ರಾಂತಿಕಾರಿ ಯಶೋಗಾಥೆ!
ನಮ್ಮ ಕರಾವಳಿಯ ಹೆಮ್ಮೆಯ ಜಿಲ್ಲೆಯಾದ ಉಡುಪಿ ಕೇವಲ ಪ್ರವಾಸೋದ್ಯಮ ಅಥವಾ ಶಿಕ್ಷಣಕ್ಕೆ ಮಾತ್ರವಲ್ಲ, ಇದೀಗ ಗ್ರಾಮೀಣಾಭಿವೃದ್ಧಿಯಲ್ಲೂ ಇಡೀ ದೇಶಕ್ಕೇ ಮಾದರಿಯಾಗಿ ನಿಂತಿದೆ. ಉಡುಪಿ ಜಿಲ್ಲೆಯ ಒಟ್ಟು 155 ಗ್ರಾಮ ಪಂಚಾಯಿತಿಗಳ ಪೈಕಿ 5 ಪಂಚಾಯಿತಿಗಳು ಏಕಕಾಲದಲ್ಲಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ರಾಷ್ಟ್ರೀಯ ಪಂಚಾಯಿತಿ ಪ್ರಶಸ್ತಿ’ ಮುಡಿಗೇರಿಸಿಕೊಳ್ಳುವ ಮೂಲಕ ಇಡೀ ಕರ್ನಾಟಕ ರಾಜ್ಯದಲ್ಲೇ ಅಪರೂಪದ ಐತಿಹಾಸಿಕ ದಾಖಲೆ ಬರೆದಿವೆ!
ಕನಿಷ್ಠ ಸಂಪನ್ಮೂಲಗಳನ್ನು ಬಳಸಿಕೊಂಡು ಗರಿಷ್ಠ ಸಾಧನೆ ಮಾಡುವುದು ಹೇಗೆ ಎಂಬುದನ್ನು ಈ ಪಂಚಾಯಿತಿಗಳು ದೇಶಕ್ಕೆ ತೋರಿಸಿಕೊಟ್ಟಿವೆ. ಬಡತನ ಮುಕ್ತ ಗ್ರಾಮ, ಆರೋಗ್ಯಕರ ಪರಿಸರ, ನೀರಿನ ಸಮೃದ್ಧಿ, ಸ್ವಾವಲಂಬನೆ ಮತ್ತು ಸಾಮಾಜಿಕ ಭದ್ರತೆಯನ್ನು ಸಾಧಿಸಿ ‘ದಿಲ್ಲಿ’ಯ ಮನಗೆದ್ದ ಆ 5 ‘ಪಂಚರತ್ನಗಳ’ ಸಂಪೂರ್ಣ ಯಶೋಗಾಥೆ ಇಲ್ಲಿದೆ.
1. ಮುದ್ರಾಡಿ ಗ್ರಾಮ ಪಂಚಾಯಿತಿ: ಬಡತನ ಮುಕ್ತ ಹಾಗೂ ಸುಧಾರಿತ ಜೀವನೋಪಾಯ
ವಿಭಾಗ: ಬಡತನ ಮುಕ್ತ ಮತ್ತು ಸುಧಾರಿತ ಜೀವನೋಪಾಯ (ಪ್ರಥಮ ಸ್ಥಾನ)
ಮುದ್ರಾಡಿ ಗ್ರಾಮ ಪಂಚಾಯಿತಿಯು ಬಡತನ ನಿರ್ಮೂಲನೆಯಲ್ಲಿ ಮಹತ್ತರ ಸಾಧನೆ ಮಾಡಿದೆ. ಸರ್ಕಾರದ ‘ಸಂಜೀವಿನಿ’ ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು, ಗ್ರಾಮೀಣ ಬಡತನ ನಿವಾರಣೆಗೆ ಹೊಸ ಭಾಷ್ಯ ಬರೆದಿದೆ.
ಸ್ವಸಹಾಯ ಗುಂಪುಗಳ ಆರ್ಥಿಕ ಕ್ರಾಂತಿ
- ಮಹಿಳಾ ಸಬಲೀಕರಣ: ಮುದ್ರಾಡಿಯಲ್ಲಿ ಒಟ್ಟು 50 ಮಹಿಳಾ ಸ್ವಸಹಾಯ ಗುಂಪುಗಳಿದ್ದು, ಸುಮಾರು 650ಕ್ಕೂ ಹೆಚ್ಚು ಮಹಿಳೆಯರು ಇದರಲ್ಲಿ ಸಕ್ರಿಯರಾಗಿದ್ದಾರೆ. ಇವರೆಲ್ಲರಿಗೂ ಸೂಕ್ತವಾದ ಉದ್ಯೋಗ ತರಬೇತಿ ಮತ್ತು ಆರ್ಥಿಕ ನೆರವು ನೀಡಲಾಗಿದೆ.
- ಬೃಹತ್ ವಹಿವಾಟು: ಇಲ್ಲಿನ ಸ್ವಸಹಾಯ ಸಂಘಗಳ ಒಟ್ಟು ವಹಿವಾಟು ಬರೋಬ್ಬರಿ 1 ಕೋಟಿ ರೂಪಾಯಿಗಳನ್ನು ದಾಟಿದೆ! ಬ್ಯಾಂಕ್ ಸಾಲ ಸೌಲಭ್ಯಗಳ ಮೂಲಕ ಮಹಿಳೆಯರು ಸ್ವಂತ ಉದ್ಯಮಗಳನ್ನು ಸ್ಥಾಪಿಸಿದ್ದಾರೆ.
- ವೈವಿಧ್ಯಮಯ ಉದ್ಯೋಗಗಳು: ಕೃಷಿ ಪ್ರಧಾನವಾದ ಈ ಭಾಗದಲ್ಲಿ ಮಹಿಳೆಯರು ಉಪ್ಪಿನಕಾಯಿ ತಯಾರಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಟೈಲರಿಂಗ್, ಮತ್ತು ಬಟ್ಟೆ ಬ್ಯಾಗ್ ತಯಾರಿಕೆಯಂತಹ ಸ್ವಯಂ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ.
- ಮಾರುಕಟ್ಟೆ ವ್ಯವಸ್ಥೆ: ಮಹಿಳೆಯರು ತಯಾರಿಸುವ ಸ್ಥಳೀಯ ಉತ್ಪನ್ನಗಳಿಗೆ ಪಂಚಾಯಿತಿ ವತಿಯಿಂದಲೇ ಸೂಕ್ತ ಮಾರ್ಕೆಟಿಂಗ್ ಮತ್ತು ಪ್ರದರ್ಶನ ಮೇಳಗಳ ವ್ಯವಸ್ಥೆ ಕಲ್ಪಿಸಲಾಗಿದೆ.
2. ವಂಡ್ಸೆ ಗ್ರಾಮ ಪಂಚಾಯಿತಿ: ಆರೋಗ್ಯಕರ ಪಂಚಾಯಿತಿಯ ಕ್ರಾಂತಿ
ವಿಭಾಗ: ಆರೋಗ್ಯಕರ ಪಂಚಾಯಿತಿ (ದ್ವಿತೀಯ ಸ್ಥಾನ)
ಕುಂದಾಪುರ ತಾಲೂಕಿನ ವಂದ್ಸೆ ಗ್ರಾಮ ಪಂಚಾಯಿತಿಯು ಆರೋಗ್ಯ, ಶಿಕ್ಷಣ ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಮೂಲಕ ‘ಆರೋಗ್ಯಕರ ಪಂಚಾಯಿತಿ’ ಪ್ರಶಸ್ತಿಗೆ ಭಾಜನವಾಗಿದೆ. ‘ವಿವೇಕಾನಂದ ಸೇವಾ ಸಂಸ್ಥೆ’ಯ ಸಹಯೋಗದೊಂದಿಗೆ ಪಂಚಾಯಿತಿಯು ಆರೋಗ್ಯ ಕ್ಷೇತ್ರದಲ್ಲಿ ಅದ್ಭುತ ಕೆಲಸ ಮಾಡಿದೆ.
ಕ್ರಾಂತಿಕಾರಿ ಆರೋಗ್ಯ ಕ್ರಮಗಳುವಿಶೇಷ ಕಾಳಜಿ: ವಂದ್ಸೆ ಪಂಚಾಯಿತಿ ವ್ಯಾಪ್ತಿಯಲ್ಲಿ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು, ವಯೋವೃದ್ಧರು ಮತ್ತು ಮಾನಸಿಕ ವಿಕಲಚೇತನರನ್ನು ಗುರುತಿಸಿ, ಅಂತಹ 305 ಜನರಿಗೆ ವಿಶೇಷ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆ.
ಪಾಲನಾ ಸೇವೆ (Palliative Care): ಹಾಸಿಗೆ ಹಿಡಿದಿರುವ 71 ರೋಗಿಗಳು ಮತ್ತು ಇನ್ನೊಬ್ಬರನ್ನು ಅವಲಂಬಿಸಿ ಬದುಕುತ್ತಿರುವ 132 ದೀರ್ಘಕಾಲದ ಕಾಯಿಲೆಯ ರೋಗಿಗಳಿಗೆ ಕೇಂದ್ರದ ಸಿಬ್ಬಂದಿ ನಿರಂತರವಾಗಿ ಮನೆ ಬಾಗಿಲಿಗೇ ಹೋಗಿ ಉಚಿತ ಸೇವೆ ಮತ್ತು ಸಾಂತ್ವನ ನೀಡುತ್ತಿದ್ದಾರೆ.
ತುರ್ತು ವಾಹನ ಸೌಲಭ್ಯ: ರೋಗಿಗಳ ತುರ್ತು ಚಿಕಿತ್ಸೆಗಾಗಿ ಪಂಚಾಯಿತಿಯು 2 ಆಂಬುಲೆನ್ಸ್ ಹಾಗೂ ಒಂದು ಶವ ಶೈತ್ಯೀಕರಣ (ಫ್ರೀಜರ್ ಬಾಕ್ಸ್) ಪೆಟ್ಟಿಗೆಯ ವ್ಯವಸ್ಥೆಯನ್ನು ಮಾಡಿಕೊಟ್ಟಿರುತ್ತಾರೆ.
3. ಮಡಾಮಕ್ಕಿ ಗ್ರಾಮ ಪಂಚಾಯಿತಿ: ನೀರಿನ ಸಮೃದ್ಧಿಗೆ ಮಾದರಿ
ವಿಭಾಗ: ನೀರು ಸಮೃದ್ಧ ಪಂಚಾಯಿತಿ (ದ್ವಿತೀಯ ಸ್ಥಾನ)
ಹೆಬ್ರಿ ತಾಲೂಕಿನ ಅರೆಮಲೆನಾಡು ಪ್ರದೇಶದಲ್ಲಿರುವ ಮಡಾಮಕ್ಕಿ ಗ್ರಾಮ ಪಂಚಾಯಿತಿಯು ಕೇವಲ 9 ತಿಂಗಳು ಮಳೆ ಬೀಳುವ ಜಾಗವಾಗಿದ್ದರೂ, ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗದಂತೆ ಜಲಮೂಲಗಳ ಸಂರಕ್ಷಣೆ ಮಾಡಿ ದೇಶದ ಗಮನ ಸೆಳೆದಿದೆ.
ಜಲ ಸಂರಕ್ಷಣೆಯ ಯಶಸ್ಸಿನ ಸೂತ್ರಗಳು
ಮನೆ ಮನೆಗೆ ಜಲ ಮೀಟರ್: ಲಭ್ಯವಿರುವ ಕನಿಷ್ಠ ಜಲಮೂಲದಲ್ಲೇ 800 ಮನೆಗಳಿಗೆ ಮೀಟರ್ ಅಳವಡಿಸಿ, ‘ನೀರ್-ಜಲ ಮಿತ್ರರ’ ಮೂಲಕ ಪೋಲಾಗುತ್ತಿದ್ದ ನೀರನ್ನು ತಡೆದು ಸಮರ್ಪಕವಾಗಿ ವಿತರಿಸಲಾಗುತ್ತಿದೆ.
ಶುದ್ಧ ಕುಡಿಯುವ ನೀರು: ಪ್ರತಿ 4 ತಿಂಗಳಿಗೊಮ್ಮೆ ಓವರ್ಹೆಡ್ ಟ್ಯಾಂಕ್ಗಳ ಕ್ಲೋರಿನೇಷನ್ ಮತ್ತು ನೀರಿನ ಗುಣಮಟ್ಟದ ತಪಾಸಣೆಯನ್ನು ಕಡ್ಡಾಯವಾಗಿ ಮಾಡಲಾಗುತ್ತದೆ.
ನರೇಗಾ ಮತ್ತು ಜಲ ಮರುಪೂರಣ: ನರೇಗಾ ಯೋಜನೆಯಡಿ 100ಕ್ಕೂ ಹೆಚ್ಚು ಬಾವಿ, 50ಕ್ಕೂ ಹೆಚ್ಚು ಜೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ. 2 ಮಡಗಗಳ ಹೂಳೆತ್ತುವ ಮೂಲಕ ಅಂತರ್ಜಲ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.
4. ಸಾಣೂರು ಗ್ರಾಮ ಪಂಚಾಯಿತಿ: ಸ್ವಾವಲಂಬನೆಯ ಪಥ
ವಿಭಾಗ: ಮೂಲಸೌಕರ್ಯ ಮತ್ತು ಸ್ವಾವಲಂಬಿ ಪಂಚಾಯಿತಿ (ತೃತೀಯ ಸ್ಥಾನ)
ಕಾರ್ಕಳ ತಾಲೂಕಿನ 7,371 ಜನಸಂಖ್ಯೆ ಹೊಂದಿರುವ ಸಾಣೂರು ಗ್ರಾಮ ಪಂಚಾಯಿತಿಯು ಸ್ಥಳೀಯ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ, ಗ್ರಾಮಸ್ಥರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ಅತ್ಯುತ್ತಮ ದಕ್ಷತೆ ತೋರಿದೆ.
ಸ್ವಾವಲಂಬನೆ ಮತ್ತು ತಂತ್ರಜ್ಞಾನ:
ಆಧುನಿಕ ಆಡಳಿತ: ಪಂಚಾಯಿತಿ ವ್ಯಾಪ್ತಿಯಲ್ಲಿ ಇಂಟರ್ನೆಟ್, ಸೌರಶಕ್ತಿ (Solar Power) ಮತ್ತು ಡಿಜಿಟಲ್ ಸೇವೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆ ನೀಡಲಾಗುತ್ತಿದೆ.
ಪಾರದರ್ಶಕತೆ: ತೆರಿಗೆ ವಸೂಲಾತಿ ಮತ್ತು ಇ-ಆಡಳಿತದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದ್ದು, ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಸಾಣೂರು ಸಾಕ್ಷಿಯಾಗಿದೆ.
5. ಹಕ್ಲಾಡಿ ಗ್ರಾಮ ಪಂಚಾಯಿತಿ: ಸಾಮಾಜಿಕ ಭದ್ರತೆಯ ನೆರಳು
ವಿಭಾಗ: ಸಾಮಾಜಿಕ ನ್ಯಾಯ ಮತ್ತು ಸುರಕ್ಷಿತ ಪಂಚಾಯಿತಿ (ತೃತೀಯ ಸ್ಥಾನ)
ಕುಂದಾಪುರ ತಾಲೂಕಿನ ಹಕ್ಕಾಡಿ ಗ್ರಾಮ ಪಂಚಾಯಿತಿಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳುವ ಮೂಲಕ ‘ಸಾಮಾಜಿಕ ಭದ್ರತೆ’ಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ.
ಪ್ರಮುಖ ಸಾಧನೆಗಳು:
ಶೇ.100 ಪ್ರಗತಿ: ಅರ್ಹ ಫಲಾನುಭವಿಗಳಿಗೆ ಶೇ.100 ರಷ್ಟು ಪಿಂಚಣಿ, ವಿಕಲಚೇತನರ ಗುರುತಿನ ಚೀಟಿ ಮತ್ತು ಆರೋಗ್ಯ ಭರವಸೆ ಒದಗಿಸಲಾಗಿದೆ.
ವಿಶೇಷ ಚೇತನರ ಆರೈಕೆ: ಗ್ರಾಮದ 102 ವಿಕಲಚೇತನರಿಗೂ ಶೇ.100 ರಷ್ಟು ಯುಡಿಐಡಿ (UDID) ಕಾರ್ಡ್ ವಿತರಿಸಿ ನೆರವಾಗಿದ್ದಾರೆ.
ವಸತಿ ಯೋಜನೆ: ಅರ್ಹ ಕುಟುಂಬಗಳಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಹಾಗೂ ವಸತಿ ರಹಿತರಿಗೆ ಮನೆಗಳ ನಿರ್ಮಾಣ ಮಾಡಿಕೊಡಲಾಗಿದೆ
ಕರಾವಳಿ ಪಂಚಾಯಿತಿಗಳ ಮುಂದಿರುವ ಪ್ರಮುಖ ಸವಾಲುಗಳು
ವಿದ್ಯುತ್ ಅಭಾವ ಮತ್ತು ಕತ್ತಲೆ: ಮಡಾಮಕ್ಕಿಯ ಕೆಲವು ಮಲೆನಾಡು ಭಾಗದ ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ತಲುಪಿಲ್ಲ. ಮೊಬೈಲ್ ನೆಟ್ವರ್ಕ್ ಕೂಡ ಸಿಗದೆ ಜನ ಪರದಾಡುತ್ತಿದ್ದಾರೆ.
ರಸ್ತೆಗಳ ದುರಸ್ತಿ: ಮಳೆಗಾಲದಲ್ಲಿ ಗ್ರಾಮೀಣ ಭಾಗದ ಕಚ್ಚಾ ರಸ್ತೆಗಳು ಕೆಸರಾಗುತ್ತಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಹೆದ್ದಾರಿಗಳು ಕೂಡ ಗುಂಡಿ ಬಿದ್ದಿವೆ.
ವೈಜ್ಞಾನಿಕ ಕಸ ವಿಲೇವಾರಿ: ಎಸ್ಡಬ್ಲ್ಯೂಎಂ (Solid Waste Management) ಘಟಕಗಳಿಗೆ ಸೂಕ್ತ ಜಾಗದ ಕೊರತೆಯಿದ್ದು, ವೈಜ್ಞಾನಿಕ ಕಸ ವಿಲೇವಾರಿ ದೊಡ್ಡ ಸವಾಲಾಗಿದೆ.
ವಾಹನ ದಟ್ಟಣೆ: ಪಂಚಾಯಿತಿ ಕಚೇರಿಗಳ ಮುಂದೆ ಸಾರ್ವಜನಿಕರ ವಾಹನ ಪಾರ್ಕಿಂಗ್ ಮಾಡಲು ಸೂಕ್ತ ಜಾಗವಿಲ್ಲದೆ ಸಾರಿಗೆ ದಟ್ಟಣೆ ಉಂಟಾಗುತ್ತಿದೆ.